ಆರೋಗ್ಯ

ಮಜ್ಜಿಗೆ ಹುಲ್ಲು ಪ್ರಯೋಜನಗಳು (Lemon grass, Cymbopogon citratus)

ಹುಲ್ಲಿನ ಜಾತಿಗೆ ಸೇರಿದ ಬುಡವೊಂದು ದಟ್ಟ ಪೊದರಾಗಿ ಬೆಳೆಯುವ ಮಜ್ಜಿಗೆ ಹುಲ್ಲು ಪ್ರತಿ ಮನೆಯಲ್ಲೂ ಮನೆ ಮಾತಾಗಿದ್ದು ಮನೆಮದ್ದಿನ ಮಾತೆಯೂ ಹೌದು. ಇದಕ್ಕೆ ಇಂಗ್ಲಿಷ್ನಲ್ಲಿ ಮಲಬಾರ್ ಗ್ರಾಸ್ ಎಂದರೆ ಸಂಸ್ಕೃತದಲ್ಲಿ ತಕ್ರತೃಣ ಎನ್ನುವರು. ಆಯುರ್ವೇದ ಚಿಕಿತ್ಸೆಯಲ್ಲಿ ಇದು ತನ್ನದೇ ಆದ ಮಹತ್ವ ಹೊಂದಿದೆ. ಇದರ ಎಲೆಯು ಉದ್ದವಾಗಿಯೂ, ಚೂಪವಾಗಿಯೂ , ಹರಿತವಾಗಿಯೂ ಇದ್ದು ಔಷಧ ಮೂಲವಾಗಿದೆ. ಮದುವೆ, ಉಪನಯನ ಇತ್ಯಾದಿ ವಿಶೇಷ ಸಮಾರಂಭದ ಊಟದಲ್ಲಿ ಇದರ ಎಲೆಯ ರಸ ತೆಗೆದು, ಮಜ್ಜಿಗೆಯೊಂದಿಗೆ ಬೆರಿಸಿ ಕುಡಿಯುವ ತಂಬಳಿಯಾಗಿ ಬಳಸುತ್ತಾರೆ. ಎಕೆಂದರೆ ಇದು ಅಜೀರ್ಣವನ್ನು ನಿವಾರಿಸುವ ಗುಣಧರ್ಮ ಹೊಂದಿದೆ.

ಮಜ್ಜಿಗೆ ಹುಲ್ಲು, ಮೆಣಸಿನ ಕಾಳು, ಜೀರಿಗೆ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಎರಡು ಸಾರಿ ಮೂರು ದಿನ ಕುಡಿದರೆ ನೆಗಡಿ, ಕೆಮ್ಮು, ಶೀತ , ಅಜೀರ್ಣದಿಂದಾದ ಹೊಟ್ಟೆನೋವು, ಜ್ವರ ನಿವಾರಣೆ.

ಇದರ ಎರಡು ಎಲೆಯನ್ನು ಕುದಿಯುವ ಹಾಲಿನಲ್ಲಿ ಹಾಕಿ ಸ್ವಲ್ಪ ಸಕ್ಕರೆ ಬೆರೆಸಿ ಮಾಡಿದ ಪೇಯ ಕುಡಿಯಲು ಅತಿ ಉತ್ತಮ ಬಹುರುಚಿಕರ ಪೇಯ‌. ನನ್ನ ದೀವಗಿ ಅಜ್ಜನ ಮನೆಗೆ ಆಗಾಗ ಬರುತ್ತಿದ್ದ ಮಾವನ ಸ್ನೇಹಿತರಾದ ಆಯುರ್ವೇದ ವೈದ್ಯ ಹಳಕಾರ ಡಾಕ್ಟರ್ (ಈಗಿನ ವೈದ್ಯರ ತಂದೆಯೋ , ಅಜ್ಜನೋ ಇರಬೇಕು)ರವರು ಹೇಳಿ ಮಾಡಿಸಿ ಕುಡಿಯುತ್ತಿದ್ದ ನೆನಪು, ಅತಿ ಉತ್ತಮ ಆರೋಗ್ಯದಾಯಕ ಪೇಯ ಎಂದು ಹೇಳಿದ ಅವರ ಮಾತು ಇನ್ನೂ ನನ್ನ ಮನದಲ್ಲಿ ಕಳೆದ 40-50 ವರ್ಷಗಳಿಂದ ಹಚ್ಚ ಹಸಿರಾಗಿದೆ. ಇದರ ಎಲೆಯನ್ನು ಸಣ್ಣ ಚೂರುಗಳಾಗಿ ಮಾಡಿ ಬಿಸಿಲಿನಲ್ಲಿ.ಒಣಗಿಸಿ, ಚೂರ್ಣ ತಯಾರಿಸಿ ಇಟ್ಟುಕೊಂಡು ಬೇಕಾದಾಗ ಪೇಯವಾಗಿ, ಕಷಾಯವಾಗಿ ಬಳಸಬಹುದು. ಇದು ಅಜೀರ್ಣ, ವಾಯು ಉಬ್ಬರ, ಮಲಬದ್ಧತೆ, ರಕ್ತದೊತ್ತಡ, ಮಧುಮೇಹ ರೋಗ ನಿಯಂತ್ರಣಕ್ಕೆ ಬಹು ಪ್ರಯೋಜನಕಾರಿ.

ಆರ್. ಟಿ. ಭಟ್ಟ, ಬಗ್ಗೋಣ
(ದೇವಿಸುತ) 

Related Articles

Leave a Reply

Your email address will not be published. Required fields are marked *

Back to top button
error: Content is protected !!