ಆರೋಗ್ಯ

ಆಡುಸೋಗೆ ಸೋಪ್ಪಿನಲ್ಲಿರುವ ಅದ್ಭುತ ಔಷಧಿಯ ಗುಣ !

ಆಡಿನ ಎರಡು ತುಟಿಗಳ ಹಾಗೆ
ಅರಳಿದ ಹೂವಿನ ದಳಗಳ ಗಿಡವೆ
ಕರೆವರು ನಿನಗೆ ಆಡುಸೋಗೆ
ತಡೆಯುವೆ ಮೈಲಿಬೇನೆ ಬಾರದ ಹಾಗೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಅದರಲ್ಲಿಯೂ ಶಾಲಾ ಮಕ್ಕಳ ಪರೀಕ್ಷೆಯ ಸಮಯದಲ್ಲಿ ಕಾಡುವ, ಹೆಸರು ಕೇಳಿದರೆ ಮೈ ಜುಂ ಎನ್ನುವ ಸಾಂಕ್ರಾಮಿಕ ರೋಗವಾಗಿರುವ ಮೈಲಿಬೇನೆ ಸ್ವಲ್ಪ ನಿರ್ಲಕ್ಷಿಸಿದರೆ ಸಾಕು ಮಾರಣಾಂತಿಕ ರೋಗವಾಗಿ ಪರಿಣಮಿಸಬಲ್ಲದು. ಕೇರಿಯ ಒಂದು ಮನೆಯಲ್ಲಿ ಬಂದರೆ ಸಾಕು ಸುತ್ತಲಿನ ಮನೆಯ ಮಂದಿಗೆಲ್ಲ ಆತಂಕ. ಆ ಕಡೆಗೆ ಸುಳಿಯದಂತೆ ಮಕ್ಕಳಿಗೆಲ್ಲ ಹದ್ದುಬಸ್ತಿನಕಟ್ಟಳೆ ಸಾಮಾನ್ಯ. ಈ ರೋಗ ಬಂದ ಮೇಲೆ ಮದ್ದೆಲ್ಲೆಂದು ಊರೆಲ್ಲ ಹುಡುಕುವದಕ್ಕಿಂತ ಅದು ಬಾರದ ಹಾಗೇ ತಡೆಯುವದು ಸೂಕ್ತವಲ್ಲವೇ? ಹಾಗಿದ್ದಲ್ಲಿ ಮನೆಯ ಆಜುಬಾಜು , ಹಾಳುಬಿದ್ದ ಸ್ಥಳ, ತೋಟದ ಬೇಲಿಯ ಬದಿಯಲ್ಲಿ ಕಾಡು ಗಿಡದಂತೆ ಬೆಳದು ನಿಂತಿರುವ ಆಡುಸೋಗೆ ಇದನ್ನು ತಡೆಯುವದೆಂದರೆ ಆಶ್ಚರ್ಯವಲ್ಲವೇ?.
ನಮ್ಮ ದೇಶದ ಬಹುತೇಕ ಪ್ರದೇಶದಲ್ಲಿ ಕಂಡುಬರುವ ಈ ಆಡುಸೋಗೆ ಗಿಡವು ಉದ್ದ ಕಾಂಡ ಹೊಂದಿದ್ದು ಪೊದೆಯಾಗಿ 6-7 ಅಡಿಗಳಷ್ಟು ಎತ್ತರವಾಗಿ ಬೆಳೆಯುತ್ತಿದ್ದು ದೀರ್ಘವೃತ್ತಾಕಾರದ ತುದಿಯಲ್ಲಿ ಚೂಪಾಗಿರುವ ಹಸಿರೆಲೆ ಗೆಣ್ಣಿನ ಕೆಳಗಡೆ ಅಭಿಮುಖವಾಗಿ ಜೋಡಣೆಗೊಂಡು ತೊಟ್ಟಿಲ್ಲದ ಬಿಳಿಯ ಹೂವಿನಿಂದ ಅಲಂಕೃತಗೊಂಡಿರುತ್ತದೆ. ಹೂ ದಳಗಳು ಕೆಳಭಾಗದಲ್ಲಿ ಕೂಡಿಕೊಂಡಿದ್ದು ಮೇಲ್ಭಾಗದಲ್ಲಿ ಇಬ್ಬಾಗವಾಗಿ ಎರಡು ತುಟಿಗಳಾಗಿ ಆಡಿನ ಬಾಯಿಯಂತೆ ಕಾಣುವದರಿಂದ ಈ ಗಿಡವನ್ನು ಆಡು-ಸೋಗೆ ಎಂದು ಕರೆಯಲಾಗಿದೆ. ಇದರ ಎಲೆಗಳು ಸಿಂಹದ ಹಸ್ತವನ್ನು ಹೋಲುವದರಿಂದ ಸಂಸ್ಕೃತದಲ್ಲಿ ಸಿಂಹಪರ್ಣಿಎನ್ನುವರು. ವಸಾಕ ಎಂತಲೂ ಕರೆಯುವರು. ಇದನ್ನು ಹಿಂದಿಯಲ್ಲಿ ವಸಿಕ, ಮರಾಠಿಯಲ್ಲಿ ಆಡುಲ್ಸಾ, ತಮಿಳಿನಲ್ಲಿ ಅಡಡೊರಾಯ್, ತೆಲುಗುನಲ್ಲಿ ಅಡ್ಡರಸಮು, ಇಂಗ್ಲೀಷನಲ್ಲಿ ದಿ ಮಲಬಾರ ನಟ್ ಟ್ರೀ ಎನ್ನುವರು.
ವಾಸಾಯಾಂ ವಿದ್ಯಮಾನಾಯಾಮಾಶಾಯಾಂ ಜೀವಿತಸ್ಯ ಚ | ರಕ್ತಪಿತ್ತೀ ಕ್ಷಯಿ ಕಾಸೀ ಕಿಮರ್ಥಮವಸೀದತಿ || ರಕ್ತಪಿತ್ತ, ಕ್ಷಯ, ದಮ್ಮು ರೋಗಗಳಿಂದ ಬದುಕಲು ಬಯಸುವವರು ಆಡುಸೋಗೆಯಿರುವಾಗ ಬಳಲುವದೇಕೆ? ಈ ಎಲ್ಲಾ ರೋಗಗಳಿಂದ ಇದು ಗುಣಪಡಿಸುವದು ಖಂಡಿತ (ಧನ್ವಂತರೀ ಸಂಹಿತಾ). ಎದೆಯ ಕಫವನ್ನು ನೀರಾಗಿಸುವ ಬ್ರಾಂಕೈಟಿಸ್ನ್ನು ಆಡುಸೋಗೆ ಹೊಂದಿರುವದರಿಂದ ಇದು ಕೆಮ್ಮು, ದಮ್ಮು, ಅಸ್ತಮಾ, ಉಬ್ಬಸ, ಅತಿಸಾರ, ವಾಂತಿ, ಕಫ, ಜ್ವರ, ರಕ್ತಕಾಸ, ರಕ್ತಪಿತ್ತ, ಚವೀ ಮುಂತಾದ ರೋಗಗಳನ್ನು ನಿವಾರಿಸುವ ಗುಣಧರ್ಮಹೊಂದಿದೆ.
ಅನುಭೂತ ಯೋಗ ಸಂಗ್ರಹದಿಂದ ಅರಿತ ಅನುಭವಿಕ ವೈದ್ಯರಾದ ಶ್ರೀ. ಗ. ನಿ. ಪಟವರ್ಧನ್ರವರ ಅನುಭವಾಮೃತದಿಂದ ಹೇಳುವದಾದರೆ, ಆಡುಸೋಗೆ ಎಲೆಯ ರಸ ತುಂಬೇಸೊಪ್ಪಿನ ರಸ ಒಂದೊಂದು ತೊಲೆ ಅರಿಶಿಣ ಹಿಪ್ಪಲಿ ಚೂರ್ಣ ಕಾಲು ಕಾಲು ತೊಲೆಯನ್ನು ಎರಡು ತೊಲೆ ಕಲ್ಲು ಸಕ್ಕರೆ ಸೇರಿಸಿ ಕಾಯಿಸಿ ಎರಡು ಸಾರೆ ಕುಡಿದರೆ ಕಫವು ಸಡಿಲಾಗುವದು. ಆಡುಸೋಗೆ ಬೇರು, ಅಮೃತಬಳ್ಳಿ ಒಂದೊಂದು ತೊಲೆ ಬ್ರಹ್ಮದಂಡಿ ಕಾಲು ತೊಲೆ, ಗಜುಗದ ಹೂಂಗು ಒಂದು ಹಾಗೂ ಕೊಡಸಗದ ಬೇರು ಕಾಲು ತೊಲೆ ಅಕ್ಕೊಚ್ಚು ನೀರಿನಲ್ಲಿ ಅರೆದು ಸೋಸಿ ಮುಟ್ಟಾಗಿ ಮಿಂದ ನಂತರದ ಹದಿನಾಲ್ಕು ದಿವಸ ಬೆಳಿಗ್ಗೆ ಸೇವಿಸಿದರೆ ಬಂಜೆ ಕೂಡಾ ಸಂತಾನ ಪಡೆಯುತ್ತಾಳೆ ಎನ್ನುವದು ಸಂತಾನ ಪ್ರಾಪ್ತಿಗೊಂದು ವರದಾನ. ಆಡುಸೋಗೆಯ ಹತ್ತು ಎಲೆಯನ್ನು ಜಜ್ಜಿ ಒಂದು ಸೇರು ನೀರಿನಲ್ಲಿ ಹಾಕಿ ಕುದಿಸಿ ಬತ್ತಿಸಿದ ಕಷಾಯ 20 ಗ್ರಾಂನಷ್ಟು ಪ್ರತಿ ದಿನ ಎರಡು ಬಾರಿ ಸೇವಿಸುವದರಿಂದ ದಮ್ಮು, ಗೂರಲು ರೋಗ ನಿವಾರಣೆಯಾಗುವದೆಂದು ನಮ್ಮ ಹಾಲಕ್ಕಿ ಒಕ್ಕಲಿಗ ನಾಟೀ ವೈದ್ಯರ ಅಂಬೋಣವಾದರೆ ಆಡುಸೋಗೆ ಸ್ವರಸವನ್ನು ಸಕ್ಕರೆ ಅಥವಾ ಜೇನುತುಪ್ಪದಲ್ಲಿ ಸೇವಿಸುವದರಿಂದ ಪಿತ್ತ ನಾಶವಾಗುವದು ಎನ್ನುವದು ಧನ್ವಂತರಿ ಸಂಹಿತಾ ಉಲ್ಲೇಖ. ಆಡುಸೋಗೆ ಎಲೆರಸ ತ್ರಿಕಟು, ಹಿಪ್ಪಲಿ, ಜೀರಿಗೆ, ಅಜಮೋದ, ಚಿತ್ರಮೂಲ, ಕಾಡು ಮೆಣಸಿನ ಬೇರು, ಹಸುವಿನ ತುಪ್ಪ ಸೇರಿಸಿ ಮಾಡಿದ ಘೃತವನ್ನು ಜೇನುತುಪ್ಪ ಸೇರಿಸಿ ಸೇವಿಸುವದರಿಂದ ಕಫ, ಕೆಮ್ಮು, ಜ್ವರ, ಉಬ್ಬಸ ರೋಗ ನಿವಾರಣೆಯಾಗುವದು ಎಂಬುದು ಚರಕ ಮಹರ್ಷಿಗಳ ಅಭಿಮತ. ಆಡುಸೋಗೆ ಬೇರಿನ ಕಷಾಯ ಜೇನುತುಪ್ಪ ಸೇರಿಸಿ ಪ್ರತಿದಿನ ಸೇವಿಸುವದರಿಂದ ಮಧುಮೇಹ ನಿವಾರಣೆಯಾಗುವದು ಎಂಬುದು ಮಧುಮೇಹ ರೋಗಿಗಳಿಗೊಂದು ಸಿಹಿ ಸುದ್ಧಿಯಾದರೆ ರಕ್ತವಾಂತಿ ಶಮನಕ್ಕೆ ಇದು ದಿವ್ಯವೌಷಧಿ ಎಂಬುದು ಸತ್ಯ ಸಂಗತಿ. ಆಡುಸೋಗೆ ಸೊಪ್ಪನ್ನು ಅರೆದು ಗಂಧಮಾಡಿ ಲೇಪಿಸಿಕೊಂಡು ಸ್ನಾನ ಮಾಡುವದರಿಂದ ಬೆವರುಸೆಲೆ, ಚರ್ಮದ ಕಲೆ, ಅಲರ್ಜಿಯಿಂದಾದ ಅನೇಕ ಚರ್ಮರೋಗಗಳು ಮಾಯವಾಗುವವು ಎನ್ನುವದು ಸರ್ವವಿಧಿತ. ಅಸ್ತಮಾ, ದಮ್ಮು, ಹುಳುಕಡ್ಡಿ, ಸಂಧಿವಾತ, ಸರ್ಪಸುತ್ತು, ರಕ್ತಸ್ರಾವ, ಮೂತ್ರರೋಗ, ರಕ್ತಕಾಸ ಇತ್ಯಾದಿ ಅನೇಕ ರೋಗಗಳನ್ನು ಇದು ನಿಯಂತ್ರಿಸುತ್ತದೆ.
ವಿಶೇಷವಾಗಿ ಸಂಕ್ರಾಮಿಕ ರೋಗವಾಗಿರುವ ಮೈಲೀಬೇನೆ ಬಾರದಂತೆ ತಡಗಟ್ಟುವದರಲ್ಲಿ ಅದ್ಭುತ ಪವಾಡವನ್ನೇ ತೋರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ, ಹತ್ತಿರದಲ್ಲಿ ಮೈಲೀಬೇನೆ ಬಂದಿದೆಯೆಂಬ ಸುದ್ಧಿ ತಿಳಿದ ತಕ್ಷಣ ಆಡುಸೋಗೆ ಸೊಪ್ಪನ್ನು ತಂದು ತೊಳೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಸ್ವಲ್ಪ ನೀರು ಹಾಗೂ ಜ್ಯೇಷ್ಠಮಧು ಸೇರಿಸಿ ಅರೆದು ಸೋಸಿ ರಸ ತೆಗದು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ 3 ರಿಂದ 5 ಚಮಚ ತನಕ (ವಯೋಮಾನಕ್ಕನುಸರಿಸಿ) ಒಂದು ವಾರದ ತನಕ ಕುಡಿದರೆ ಕುಡಿದ ವ್ಯಕ್ತಿಗೆ ಈ ರೋಗ ಖಂಡಿತವಾಗಿ ಅಂಟುವದಿಲ್ಲ. ತಗುಲಿದರೂ ರೋಗ ಕ್ಷೀಣವಾಗಿರುತ್ತದೆ ಎಂಬುದು ಲೇಖಕರ ಸ್ವ ಆನುಭವ. ಚಿರಪರಿಚಿತ ಬೇಲಿಗಿಡವಾಗಿ ಎಲ್ಲೆಲ್ಲೂ ಕಂಡುಬರುವ ಈ ಆಡುಸೋಗೆ ವ್ಯಾಸಿಸೈನ್ ಎಂಬ ಕಟುಕಹಿ ಕ್ಷಾರವನ್ನು ಹೊಂದಿರುವದರಿಂದ ಉಸಿರಾಟದ, ಶ್ವಾಸನಾಳಗಳ ರೋಗಗಳನ್ನು ಗುಣಪಡಿಸುವಲ್ಲಿ ತನ್ನದೇ ಆದ ಮಹತ್ತರ ಔಷಧಿ ಗುಣವನ್ನು ಹೊಂದಿದೆಯಲ್ಲದೇ ಪ್ರಸಿದ್ಧ ಧನ್ವಂತರೀ ವೈದ್ಯರ ಅಭಿಪ್ರಾಯದಂತೆ ಈ ಕಳಗಿನ ರೋಗಗಳಿಗೆ ಉತ್ತಮ ಪರಿಣಾಮಕಾರಿ.
Image may contain: plant, tree, outdoor and nature
ಆಡುಸೋಗೆಯ ಹಸಿ ಎಲೆಯೊಂದನ್ನು ಪ್ರತಿದಿನ ಊಟದ ನಂತರ ತಿನ್ನುವದರಿಂದ ಅಸ್ತಮ ರೋಗ ನಿಯಂತ್ರಣಕ್ಕೆ ಬರುವದು.
ಆಡುಸೋಗೆ ಹಸಿ ಎಲೆಯನ್ನು ಅರೆದು ಗಂಧಮಾಡಿ ಲೇಪಿಸಿಕೊಳ್ಳುವದರಿಂದ ಸಂಧಿವಾತದ ನೋವು, ಅರ್ಧಾಂಗವಾಯುವಿನಿಂದಾದ ನೋವು ನಿವಾರಣೆ.
ಆಡುಸೋಗೆ ಹಸಿ ಎಲೆಯ ರಸದಲ್ಲಿ ಅರಿಶಿಣ ಪುಡಿ ಸೇರಿಸಿ ಮಾಡಿದ ಗಂಧವನ್ನು ಒಂದುವಾರದ ವರೆಗೆ ಲೇಪಿಸಿದರೆ ಸರ್ಪಸುತ್ತು ಗುಣವಾಗುವದು.
ಆಡುಸೋಗೆ ಹಸಿ ಎಲೆಯ ರಸದಲ್ಲಿ ಅರಿಶಿಣ ಪುಡಿ ಹಾಗೂ ಲಿಂಬೆ ಹುಳಿ ಸೇರಿಸಿ ಮಾಡಿದ ಗಂಧವನ್ನು ಲೇಪಿಸಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡುವದರಿಂದ ತುರಿಕೆ , ಕಜ್ಜಿ ಬೆವರಸಾಲೆ ನಿವಾರಣೆಯಾಗುವದು.
ಆಡುಸೋಗೆ ರಸದಲ್ಲಿ ಜೇನುತುಪ್ಪ ಸೇರಿಸಿ ಸೇವಿಸುವದರಿಂದ ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವವಾಗುತ್ತದ್ದರೂ ಖಂಡಿತವಾಗಿ ನಿಯಂತ್ರಣಕ್ಕೆ ಬರುವದು.
ಆಡುಸೋಗೆ ಎಲೆರಸ, ಶುಂಠಿರಸ, ಕಾಳುಮೆಣಸು ಸೇರಿಸಿ ಮಾಡಿದ ಕಷಾಯಕ್ಕೆ ಜೇನುತುಪ್ಪ ಸೇರಿಸಿ ವಯೋಮಾನಕ್ಕನುಸರಿಸಿ ಸೇವಿಸುವದರಿಂದ ಕೆಮ್ಮು, ದಮ್ಮು, ಕಫ ರೋಗ ನಿಯಂತ್ರಣಕ್ಕೆ ಬರುತ್ತದೆ.
ಆಡುಸೋಗೆ ಎಲೆರಸ, ಅರಿಶಿಣ, ಗೋಮೂತ್ರ ಸೇರಿಸಿ ಮಾಡಿದ ಗಂಧ ಲೇಪನದಿಂದ ಚರ್ಮರೋಗ ನಿವಾರಣೆಯಾಗುವದು.ಟ
ಆಡುಸೋಗೆ ಬೇರು, ಅಮೃತಬಳ್ಳಿ ಬೇರು, ಗುಳ್ಳದ ಬೇರುಗಳ ಕಷಾಯ ಸೇವನೆಯಿಂದ ಜ್ವರ, ಉಬ್ಬಸ, ಕೆಮ್ಮು ನಿವಾರಣೆ.
ಆರ್. ಟಿ. ಭಟ್ಟ, ಬಗ್ಗೋಣ

Related Articles

Leave a Reply

Your email address will not be published. Required fields are marked *

Back to top button
error: Content is protected !!