ರಾಜ್ಯಾದ್ಯಂತ ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ
ರಾಜ್ಯಾದ್ಯಂತ ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, SSLC ಪರೀಕ್ಷೆಗೆ ಮಂಡ್ಯ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ. ಈ ಬಗ್ಗೆ ಮಾತನಾಡಿದ ಮಂಡ್ಯ ಡಿಡಿಪಿಐ ಜವರೇಗೌಡ, ಮಂಡ್ಯ ಜಿಲ್ಲೆಯಾದ್ಯಂತ 83 ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಬಾಲಕರು 10,963, ಬಾಲಕಿಯರು 10,073, ಪುನರಾವರ್ತಿಗಳು 480 ಸೇರಿದಂತೆ ಜಿಲ್ಲೆಯಲ್ಲಿ 21,036 ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದ್ರು. ಕೆ.ಆರ್.ಪೇಟೆ 9, ಮದ್ದೂರು 16, ಮಳವಳ್ಳಿ 13, ಮಂಡ್ಯ 19, ನಾಗಮಂಗಲ 9, ಪಾಂಡವಪುರ 8 ಹಾಗೂ ಶ್ರೀರಂಗಪಟ್ಟಣ 9 ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, CCTV ಹದ್ದಿನ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ.
ಉತ್ತಮ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಭ್ಯಾಸ ಮಾಡಿಸಲಾಗಿದ್ದು, ಪರೀಕ್ಷೆಗೆ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ. ಇನ್ನು ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಭಯವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬನ್ನಿ ಎಂದು ಮಂಡ್ಯ ಡಿಡಿಪಿಐ ಜವರೇಗೌಡ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.